ಕುಂದಣಗಾರಿಕೆ

 ಒಡವೆಗಳಲ್ಲಿ ಹರಳುಗಳನ್ನು ಮೆಟ್ಟಿ ಹುದುಗಿಸುವ, ಹರಳಿಗೆ ಮೆರುಗು ಕೊಡುವ ಕಲೆಗೆ ಈ ಹೆಸರಿದೆ. ಸಾಮಾನ್ಯವಾಗಿ ಚಿನ್ನ ಬೆಳ್ಳಿಯ ಕೆಲಸಮಾಡುವವರು ಈ ಪದವನ್ನು ಬಳಸುತ್ತಾರೆ. ಅಂದಕ್ಕೆ ಕುಂದಣವಿಟ್ಟಂತೆ ಎಂಬ ಮಾತು ಕನ್ನಡದಲ್ಲಿ ಪ್ರಸಿದ್ಧವಾದುದು. ವಜ್ರಗಳನ್ನು ಕ್ರಮವಾಗಿ ಕತ್ತರಿಸಿ ನಯಗೊಳಿಸಿ ಕೊರೆದು ಪ್ರಕಾಶಿಸುವಂತೆ ಮಾಡಿ ಒಡವೆಗಳಲ್ಲಿ ಕೂಡಿಸುವ ಕ್ರಿಯೆಯನ್ನು ಪಾಶ್ಚಾತ್ಯರು ಜೆಮ್‍ಸೆಟಿಂಗ್ ಎಂಬ ಪದದಿಂದ ನಿರ್ದೇಶಿಸುತ್ತಾರೆ. ಇದಕ್ಕೂ ಕುಂದಣಗಾರಿಕೆಯ ವಿಶೇಷ ಅರ್ಥ ಇರುವಂತಿದೆ.

 ನವರತ್ನಗಳೆಲ್ಲ ಮೊದಲಿಗೆ ಒಂದೇ ಗುಂಪಿಗೆ ಸೇರಿರುತ್ತವೆ. ಅವುಗಳ ನಿಜ ಸ್ವರೂಪ ಮತ್ತು ಹೊಳಪು ಅವುಗಳ ಯೋಗ್ಯತೆ, ನಿಜಮೌಲ್ಯ ತಿಳಿಯುವುದು ಕುಶಲಕರ್ಮಿಗಳು ಅವನ್ನು ವಿವಿಧಾಕಾರಗಳಲ್ಲಿ ಕೊಯ್ದು ಮೆರುಗು ಕೊಟ್ಟಾಗಲೆ. ಜನತೆಯ ಅಭಿರುಚಿ, ರಸಿಕತೆ, ಶ್ರೀಮಂತಿಕೆಗಳಿಗೆ ತಕ್ಕಂತೆ ವಜ್ರ ಮತ್ತು ಹರಳುಗಳ ಬೆಲೆ ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಬದಲಾಗಿರುವುದನ್ನು ಕಾಣಬಹುದು. ಒಡವೆಯ ಅಂತಿಮ ಮೆರುಗಿಗೆ ಕಾರಣವಾದ ವಜ್ರ ಮತ್ತು ಹರಳುಗಳ ಉಪಯೋಗ ಬಹಳ ಪ್ರಾಚೀನವಾದುದು. ಭಾರತದಲ್ಲಿಯಂತೂ ಇದರ ವ್ಯಾಪ್ತಿ ರಾಮಾಯಣ, ಮಹಾಭಾರತಗಳ ಕಾಲಕ್ಕೆ ಹೋಗುತ್ತದೆ. ಭಾರತದ ಚಕ್ರವರ್ತಿಗಳ ವಜ್ರದ ಆಯ್ಕೆ, ಸಂಗ್ರಹ ಮತ್ತು ಅವುಗಳಿಗೆ ಕುಶಲಕರ್ಮಿಗಳಿಂದ ಮೆರುಗು ಕೊಡಿಸಿ ಉಂಗುರ, ಕಿರೀಟಾದಿಗಳಲ್ಲಿ ಕೂರಿಸುತ್ತಿದ್ದ ಸಂಗತಿ ಲೋಕ ಪ್ರಸಿದ್ಧ. ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನದಿಂದ ಇಂದಿನ ಮೇಲುಕೋಟೆಯ ವೈರಮುಡಿಯವರೆಗೆ ಉದಾಹರಣೆಗಳಿವೆ. ಭಾರತದ ದಕ್ಷಿಣ ತುದಿಯಲ್ಲಿ ಇಂದಿಗೂ ವಿರಾಜಿಸುತ್ತಿರುವ ಕನ್ಯಾಕುಮಾರಿ ವಿಗ್ರಹದ ಕಂಠವನ್ನಲಂಕರಿಸಿರುವ ವಜ್ರವನ್ನು ಇಲ್ಲಿ ನೆನೆಯಬಹುದು.

 ಪ್ರಾಣಿಗಳ ಮೂಳೆಗಳನ್ನು ಒಡವೆಯ ರೂಪದಲ್ಲಿ ಉಪಯೋಗಿಸುತ್ತಿದ್ದ ಮಾನವ ಪ್ರವೃತ್ತಿಗೆ ಹರಳಿನ ಉಪಯೋಗ ಎರಡನೆಯದಾಗಿ ಬರುತ್ತದೆ. ಕೆಲವು ಕಾಲ ಮೂಳೆಯ (ದಂತ) ಒಡವೆಗಳ ಮೇಲೆ ಹರಳು ಸಿಕ್ಕಿಸಿ ಉಪಯೋಗಿಸುವ ಪದ್ಧತಿಯೂ ಜಾರಿಯಲ್ಲಿದ್ದಿತು. ಹಿಂದಿನ ಕಾಲದಲ್ಲಿ ಬಣ್ಣಬಣ್ಣದ ಹರಳುಗಳ ಉಪಯೋಗ ಹೆಚ್ಚು ಆಕರ್ಷಕವಾಗಿತ್ತು. ಬಣ್ಣದ ಮೆರುಗು ಒಮ್ಮೊಮ್ಮೆ ಸಾಮಾನ್ಯವಾದುದನ್ನೂ ಅಸಾಮಾನ್ಯಗೊಳಿಸಿ ಮೋಸಕ್ಕೆ ಗುರಿ ಮಾಡುತ್ತಿದ್ದುದರಿಂದಲೋ ಏನೋ ಬಣ್ಣದ ಹರಳುಗಳ ಬಳಕೆ ಕ್ರಮೇಣ ಕುಗ್ಗಿದಂತೆ ಕಂಡು ಬರುತ್ತದೆ. ಹದಿನೈದನೆಯ ಶತಮಾನದಿಂದೀಚೆಗೆ ಬಣ್ಣರಹಿತ ವಜ್ರ ಮತ್ತು ಹರಳುಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಗಿ ಕಂಡುಬರುತ್ತಿದೆಯೆಂದು ವಿವಿಧ ಮೂಲಗಳ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

 ಒರಟಾಗಿರುವ ಖನಿಜವನ್ನು ಕತ್ತರಿಸಿ ಉಜ್ಜಿ ಪ್ರಕಾಶಮಾನವಾಗುವಂತೆ ಮಾಡುವ ಕಲೆ ಕ್ರಿಸ್ತಪೂರ್ವದ ಅನೇಕ ಶತಮಾನಗಳಿಂದಲೂ ಜಾರಿಯಲ್ಲಿತ್ತು. ಪ್ರಪಂಚದ ಅತ್ಯಂತ ಪ್ರಾಚೀನ ನಾಗರಿಕತೆಗಳಾದ ಭಾರತ, ಚೀನ, ಈಚಿಪ್ಟ್, ಬ್ಯಾಬಿಲೋನಿಯಾಗಳಲ್ಲೆಲ್ಲ ಈ ಉದ್ಯಮ ಬಳಕೆಯಲ್ಲಿತ್ತೆಂದು ತಿಳಿದುಬರುತ್ತದೆ. ಖನಿಜರೂಪದ ವಜ್ರವನ್ನು ಕತ್ತರಿಸಿ, ಉಜ್ಜಿ, ನಯಗೊಳಿಸಿದ ಅನಂತರ ಅದರ ಬೆಲೆಯನ್ನು ನಿರ್ಧರಿಸಲಾಗುತ್ತಿತ್ತು. ಇದರಿಂದ ಕುಂದಣಗಾರಿಕೆ ಅಥವಾ ಮೆರುಗು ಕೊಡುವಿಕೆಯ ಪ್ರಾಮುಖ್ಯ ಎಷ್ಟೆಂದು ತಿಳಿಯಬಹುದು. ರಾಜರು ಉಪಯೋಗಿಸುತ್ತಿದ್ದ ವಜ್ರದ ಮುದ್ರೆಯುಂಗುರಗಳ ಕೊರೆಯುವಿಕೆಗೆ ವಿಶೇಷ ತಜ್ಞರಿರುತ್ತಿದ್ದರು. ಇದರ ವೈಶಿಷ್ಟ್ಯ ಹೇಗಿತ್ತೆಂದರೆ ಒಬ್ಬ ಕೊರೆದುದನ್ನು ಮತ್ತೊಬ್ಬ ಅನುಕರಿಸಿ ಖೋಟ ಮಾಡದಷ್ಟು ಇದು ವೈಯಕ್ತಿಕ ಸಾಧನೆಯಾಗಿತ್ತು. ಇಂಥ ಕುಶಲಕರ್ಮಿಗಳ ತರಬೇತಿಗಾಗಿ ಚಕ್ರವರ್ತಿಗಳ ಆಸ್ಥಾನದಲ್ಲಿ ಆಯಾ ರಾಷ್ಟ್ರದ ಅತ್ಯುತ್ತಮ ಕುಂದಣಗಾರನ ನೇಮಕವಾಗುತ್ತಿತ್ತು. ಈತ ಪ್ರಧಾನಿ, ಸೇನಾಪತಿಗಳಷ್ಟೆ ಪ್ರಾಮುಖ್ಯ ಪಡೆದಿರುತ್ತಿದ್ದ.

 ವೈವಿಧ್ಯಮಯ ಆಭರಣಗಳ ರಚನೆಯಲ್ಲಿ ಹರಳುಗಳ ಸ್ಥಾನ ಮಹತ್ತ್ವ ಪೂರ್ಣವಾದುದು. ರಚನೆಯಾದ ಆಭರಣದ ಯಾವ ಯಾವ ಸ್ಥಾನದಲ್ಲಿ ಯಾವ ಗಾತ್ರದ, ಯಾವ ಬಣ್ಣದ ಹರುಳು ಕೂರಿಸಬೇಕೆಂಬುದೇ ನಿಜವಾದ ಕುಂದಣಗಾರಿಕೆ. ಹರಳುಗಳನ್ನು ಮನಬಂದಂತೆ ಕೂರಿಸುವಂತಿಲ್ಲ. ಅದರಿಂದ ಒಡವೆಯ ಅಂದ ಕೆಡುತ್ತದೆ. ಹರಳು ಕೂರಿಸುವಾಗ ಒಡವೆಯ ಒಟ್ಟು ಅಂದವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅದು ಇನ್ನೂ ಹೆಚ್ಚುವಂತೆ ಯೋಜಿಸಿ ಕೂರಿಸಬೇಕಾಗುತ್ತದೆ. ಯಾವ ಹರಳನ್ನು ಎಲ್ಲಿ ಕೂರಿಸಬೇಕು ಎಂಬ ಬಗ್ಗೆ ಭಾರತೀಯ ಕುಶಲಕರ್ಮಿಗಳಿಗೆ ಕೆಲವು ಧಾರ್ಮಿಕ ನಂಬಿಕೆಗಳೂ ಉಂಟು. ಉದಾಹರಣೆಗೆ ನವರತ್ನಗಳ ಉಂಗುರದ ಮಧ್ಯದ ಹರಳು ಮಾಣಿಕ್ಯವಾಗಿರಬೇಕು. (ಕೆಂಪು). ಮಾಣಿಕ್ಯ ಸರ್ಪದ ಹೆಡೆಯಲ್ಲಿ ದೊರೆಯುವ ಅಮೋಘವಾದ ಹರಳೆಂಬುದು ಭಾರತೀಯ ನಂಬಿಕೆ. ಈ ಧಾರ್ಮಿಕ ನಂಬುಗೆಯ ಸತ್ಯಾಸತ್ಯತೆ ಏನೇ ಇರಲಿ ಒಂಬತ್ತು ಹರಳುಗಳ ಮಧ್ಯೆ ಕೆಂಪು ಎದ್ದು ಕಾಣುತ್ತದೆ. ಇದರಿಂದ ತೊಟ್ಟಿರುವ ಉಂಗುರ ಹಲವರ ದೃಷ್ಟಿಸೆಳೆಯುತ್ತದೆ ಎಂಬುದು ವಾಣಿಜ್ಯ ಕುಶಲತೆಯ ಲೋಕಸತ್ಯವಂತೂ ನಿಜ.

 ಆಭರಣಗಳಿಗೆ ಹರಳು ಕೂರಿಸುವುದರಲ್ಲಿ ಎರಡು ವಿಧಗಳಿವೆ ಎಂದು ಹೇಳುತ್ತಾರೆ. ಒಂದು ಖುಲ್ಲಕಟ್ಟಡ, ಮತ್ತೊಂದು ಬಂದುಕಟ್ಟಡ ಎಂದು ಹರಳನ್ನು ಉದ್ದವಾಗಿ ಕೊಯ್ದು ಕೂರಿಸುವ ವಿಧಾನಕ್ಕೆ ಖುಲ್ಲ ಕಟ್ಟಡವೆಂದೂ ಹರಳಿನ ಮೇಲ್ಭಾಗ ಮಾತ್ರ ಕಾಣುವಂತೆ ಆಳವಾಗಿ ಹರಳನ್ನು ಹೂಳುವ ವಿಧಾನಕ್ಕೆ ಬಂದು ಕಟ್ಟಡವೆಂತಲೂ ಕರೆಯುತ್ತಾರೆ. ನವರತ್ನದ ಒಡವೆಗಳೆಲ್ಲ ಖುಲ್ಲಕಟ್ಟಡ ವಿಧಾನದಿಂದಲೆ ರಚಿತವಾಗಬೇಕೆಂಬುದು ಭಾರತೀಯ ನಂಬಿಕೆ. ಇದಕ್ಕೆ ಕಾರಣ ನವರತ್ನಗಳ ಮೇಲೆ ಸೂರ್ಯಕಿರಣಗಳು ಹಾದುಹೋಗುವಾಗ, ವಾಯು ಸಂಚಲನೆಯಾಗುವಾಗ ಅವು ಮನುಷ್ಯನ ದೇಹಕ್ಕೆ ತಗಲಿದರೆ ಅದರಿಂದ ಆಯುರಾರೋಗ್ಯ, ಮನಶ್ಯಾಂತಿ ಮತ್ತು ಐಶ್ವರ್ಯ ಹೆಚ್ಚುತ್ತದೆ-ಎಂಬುದು.

 ಕುಂದಣಗಾರಿಕೆ ಅಪಾರ ಪರಿಶ್ರಮದಿಂದ ಮಾತ್ರ ಲಭಿಸುವ ವಿಶೇಷ ಶಕ್ತಿ ಎಂಬುದು ಎಲ್ಲ ಅಕ್ಕಸಾಲಿಗರ ಮತ. ಇದು ಅಕ್ಕಸಾಲಿಗರ ಮೂಲಪುರುಷ ವಿಶ್ವಕರ್ಮನ ಅನುಗ್ರಹದಿಂದ ಸಿದ್ಧಿಸುವ ಒಂದು ಅಪೂರ್ವಶಕ್ತಿ ಎಂಬುದೂ ಕೆಲವರ ನಂಬಿಕೆ. ರತ್ನಖಚಿತವಾದ ಒಂದು ಕೊರಳಹಾರದ ಸಿದ್ಧತೆಯಲ್ಲಿ ಅಪಾರವಾದ ಕುಂದಣಗಾರಿಕೆಯ ಕುಶಲತೆ ಅಡಗಿರುತ್ತದೆ ಎಂಬುದು ತಜ್ಷರ ಅಭಿಮತ. ಪ್ರಪಂಚಾದ್ಯಂತ ಉಪಲಬ್ಧವಿರುವ ವೈವಿಧ್ಯಮಯವಾದ ವಜ್ರ ಮತ್ತು ಹರಳಿನ ಆಭರಣಗಳು ಕುಂದಣಗಾರಿಕೆಯ ಕಲಾವಂತಿಗೆಗೆ ಸಾಕ್ಷಿಯಾಗಿವೆ. ಒಂದು ಕಾಲಕ್ಕೆ ಈ ಕುಶಲಕರ್ಮಿಗಳನ್ನು ತಮ್ಮ ಆಸ್ಥಾನದಲ್ಲಿ ಇರಿಸಿಕೊಳ್ಳುವ ಬಗ್ಗೆ ಚಕ್ರವರ್ತಿಗಳು, ರಾಜಮಹಾರಾಜರುಗಳ ಮಧ್ಯೆ ದೊಡ್ಡ ಸ್ವರ್ಧೆಯೇ ನಡೆಯುತ್ತಿದ್ದುದುಂಟು. ಇಂದೂ ಅದು ಲಕ್ಷಾಧಿಪತಿಗಳ, ಐಶ್ವರ್ಯವಂತ ಮಹಿಳೆಯರ ಮಧ್ಯೆ ಉಳಿದುಕೊಂಡಿದೆ ಎನ್ನಬಹುದು.       

(ಎಚ್.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ